ಅರಟನಾಲಗೆ 
	ಕಿರಣ ಅಣಬೆ (ರೆ ಫಂಗಸ್) ಎಂಬ ಬೂಜಿನಿಂದ ದನಗಳಿಗೆ ನಿಧಾನವಾಗಿ ಬರುವ, ಬೇರೂರುವ ರೋಗ (Actinomycosis; Lumpy Jaw). ಅಪೂರ್ವವಾಗಿ ಕುರಿ ಆಡುಗಳಲ್ಲೂ ತುಂಬ ಅಪರೂಪವಾಗಿ ನಾಯಿಗಳಲ್ಲೂ ಕಾಣಬರುತ್ತದೆ. ಪ್ರಾಣಿಗಳಲ್ಲೂ ಮಾನವನಲ್ಲೂ ಒಂದೊಂದು ಪರಪಿಂಡಿ (ಪ್ಯಾರಸೈಟ್). ಇದರ ಹುಣ್ಣುಗಳಿಂದ ಹೊರಡುವ ಕೀವು, ರಸಿಕೆಗಳಿಂದ ಇನ್ನೊಂದು ಪ್ರಾಣಿಗೆ ರೋಗ ಅಂಟುವುದು. ರೋಗ ಮುಖ್ಯವಾಗಿ ಕಾಣುವುದು ದವಡೆ ಮೂಳೆ ಮತ್ತದರ ಹೊರಪದರದಲ್ಲಿ. ತಲೆಯ ಬೇರೆ ಮೂಳೆಗಳಿಗೂ ಹರಡುವುದುಂಟು. ದನದ ಕಿರಣ ಅಣಬೆ (Actinomycosis bovis) ಹೊಲಗಳಲ್ಲಿದ್ದು, ಮೇವಿನ ಮೂಲಕ ದನಗಳ ಕರುಳೊಳಗೆ ಹೊಕ್ಕರೂ ಎಲ್ಲಾದರೂ ಗಾಯವಿದ್ದರೆ ಮಾತ್ರ ಅಲ್ಲಿ ರೋಗ ಹೊರಕಾಣಿಸಿಕೊಳ್ಳುತ್ತದೆ. ಶಾಶ್ವತ ದವಡೆ ಹಲ್ಲುಗಳು ಹುಟ್ಟುವ ಕಾಲದಲ್ಲಿ ಈ ರೋಗ ದನಗಳಲ್ಲಿ ಕಾಣುವುದು ಸಾಮಾನ್ಯ. ಹೊಟ್ಟೆಯಲ್ಲಿರುವ ಈಲಿಗೂ (ಯಕೃತ್ತು) ರೋಗತಾಕಬಹುದು. ಪುಪ್ಪುಸಗಳಲ್ಲೂ ರೋಗಕಂಡಿದೆ. ಕೆಚ್ಚಲಿಗೂ ರೋಗ ಅಂಟಬಹುದು. ರೋಗಾಣುವಿನ ಸುತ್ತಲೂ ಗಡಸು ಗಂಟುಗಳು ಆಗುವುದರಿಂದ ಮೂಳೆ ಊದಿಕೊಳ್ಳುತ್ತದೆ. ಇದರೊಂದಿಗೆ ತಂತುವಿನ ಕಣಜಾಲ (ಫೈಬ್ರಸ್‍ಟಿಷ್ಯೂ) ದಟ್ಟವಾಗಿ ಬೆಳೆವುದು. ದವಡೆ ಮೂಳೆ ದಪ್ಪನಾಗಿ ಊದಿಕೊಂಡು, ಒಳಗೆ ತಂತುವಿನ ಕಣಜಾಲ ಸೇರಿಕೊಳ್ಳುವುದು. ಕೆಚ್ಚಲಿನಲ್ಲಿ ಮೊಲೆ ಚರ್ಮದ ತಳದಲ್ಲಿ ಗಂಟುಗಳಂತಿರುತ್ತವೆ. ಈ ಗಂಟಿನಲ್ಲಿ ಕೀವು ಸೇರಿಕೊಂಡು ಕುರುವಾಗಿ ಒಡೆದುಕೊಂಡು ಹುಣ್ಣಾಗಬಹುದು. ಇಲ್ಲವೇ ಹಾಲಿನ ಗ್ರಂಥಿನಾಳದ ಮೂಲಕ ಹಾಲನ್ನು ಸೇರಬಹುದು. ಅಂಥ ಹಾಲು ಕುಡಿದವರಿಗೆ ಈ ರೋಗ ಅಂಟುತ್ತದೆ.

	ಇದರ ಚಿಕಿತ್ಸೆಯಲ್ಲಿ ಮುಖ್ಯವಾಗಿ, ಸೋಡಿಯಂ ಅಯೊಡೈಡನ್ನು ರಕ್ತನಾಳಾಂತರ ಚುಚ್ಚಿಹೊಗಿಸಬಹುದು. ಬಾಯ ಮೂಲಕವಾದರೆ, ಪೊಟ್ಯಾಸಿಯಂ ಅಯೊಡೈಡಿನ ದ್ರಾವಣವನ್ನು ಬಹಳ ದಿನ ಕೊಡಬೇಕು ಜೀವಿವಿರೋಧಕ ಪೆನಿಸಿಲಿನ್‍ನಿಂದ ಹೆಚ್ಚಿನ ಅನುಕೂಲ ಆಗಬಹುದು. ಸಕಾಲದಲ್ಲಿ ಚಿಕಿತ್ಸೆ ಆದಾಗ ಈ ರೋಗದಿಂದ ಸಾವು ಅಪರೂಪ.
(ನೋಡಿ- ಅಣಬೆ-ಸೊಂಕುಗಳು)
(ನೋಡಿ- ಕಿರಣಬೆ-ಬೇನೆ)
(ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ